ಇಂಡಿಯನ್ ಫೋಕ್‍ಲೋರ್ ಸೊಸೈಟಿ-
ಇದು 1957ರಲ್ಲಿ ಸ್ಥಾಪಿತವಾಯಿತು. ಅದಕ್ಕೂ ಒಂದು ವರ್ಷ ಮೊದಲು, ಜಾನಪದದಲ್ಲಿ ಆಸಕ್ತರಾದ ಕೆಲವರು ಕಲ್ಕತ್ತೆಯಲ್ಲಿ ಸಭೆಸೇರಿ ಇಂಥದೊಂದು ಸಂಘವನ್ನು ಸ್ಥಾಪಿಸಲು ನಿರ್ಧರಿಸಿದ್ದರು. ಸಮಗ್ರ ಭಾರತದ ಜಾನಪದವನ್ನು ಸಂಗ್ರಹಿಸುವುದು, ಆಯುವುದು, ವಿಶ್ಲೇಷಿಸುವುದು, ವರ್ಗೀಕರಿಸುವುದು, ಆ ಮೂಲಕವಾಗಿ ಜಾನಪದ ಅಧ್ಯಯನಕ್ಕೆ ಅವಕಾಶ, ಪ್ರೋತ್ಸಾಹ ನೀಡುವುದು - ಇವು ಸಂಘವನ್ನು ಸ್ಥಾಪಿಸಬೇಕೆಂದಿದ್ದವರ ಎದುರಿಗಿದ್ದ ಮುಖ್ಯ ಉದ್ದೇಶಗಳಾಗಿದ್ದುವು. ಕಲ್ಕತ್ತೆಯಲ್ಲಿ ಕೇಂದ್ರ ಕಚೇರಿಯಿರುವ ಈ ಸಂಘಕ್ಕೆ ಡಾ. ಎಲ್.ಎನ್. ಸಾಹು ಮೊದಲ ಅಧ್ಯಕ್ಷರಾಗಿದ್ದರು. ಈಗ (1969) ಶ್ರೀಮತಿ ಸೋಫಿಯಾ ವಾಡಿಯ ಆ ಸ್ಥಾನದಲ್ಲಿದ್ದಾರೆ.

	ಜಾನಪದ ಸರ್ವಾಂಗೀಣ ಪ್ರಗತಿಯನ್ನು ತನ್ನ ಧ್ಯೇಯವನ್ನಾಗಿರಿಸಿಕೊಂಡ ಈ ಸಂಘಕ್ಕೆ ಆಸಕ್ತರಾದ ಯಾರು ಬೇಕಾದರೂ ಸದಸ್ಯರಾಗಬಹುದು. ಇದರಲ್ಲಿ ಆರು ಸದಸ್ಯವರ್ಗಗಳಿವೆ. ಸಭೆ, ಸಮ್ಮೇಳನಗಳನ್ನು ಕೂಡಿಸುವುದು, ಪುಸ್ತಕ, ಪತ್ರಿಕೆಗಳನ್ನು ಪ್ರಕಟಿಸುವುದು ಸಂಘದ ಕಾರ್ಯಕ್ರಮಗಳಲ್ಲಿ ಸೇರಿವೆ.						    
 (ಎಚ್.ಎಂ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ